ಫಿನಿಷಿಯ ಪಶ್ಚಿಮ ಸಿರಿಯ ಪ್ರದೇಶದಲ್ಲಿ ಪ್ರಾಚೀನಕಾಲದಲ್ಲಿದ್ದ ಒಂದು ನಾಡು. ಆಗ (ಕ್ರಿ.ಪೂ.ಸು. 1600) ಇದು ಆಕರ್, ಟೈರ್, ಸಿಡನ್ ಮುಂತಾದ ನಗರರಾಜ್ಯಗಳಿಂದ ಕೂಡಿತ್ತು.

ಫಿನಿಷಿಯದ ಪ್ರಾಚೀನ ಚರಿತ್ರೆ ಅಸ್ಪಷ್ಟವಾದ್ದು. ಫಿನಿಷಿಯನ್ನರ ನಾಗರೀಕತೆಯ ವಿಚಾರವಾಗಿ ನಿರ್ದಿಷ್ಟ ಆಧಾರಗಳಿಲ್ಲ. ಇವರು ಸೆಮಿಟಿಕ್ ಮೂಲದವರಾದ್ದರಿಂದ ಇವರ ನಾಗರಿಕತೆಯನ್ನು ಸೆಮಿಟಿಕ್ ನಾಗರಿಕತೆ ಎಂದು ಕರೆಯಲಾಗಿದೆ. ಬಹುಶಃ ಕ್ರಿ. ಪೂ. 3000ದ ಅನಂತರ ಅರೇಬಿಯದ ಮರುಭೂಮಿಯನ್ನು ಬಿಟ್ಟು ಬಂದು ಇವರು ಫಿನಿಷಿಯ ಭಾಗದಲ್ಲಿ ನೆಲೆಸಿದರೆಂದು ಅಭಿಪ್ರಾಯಪಡಲಾಗಿದೆ.

ಫಿನಿಷಿಯನರು ತಮ್ಮನ್ನು ಕ್ಯಾನಾನೈಟರೆಂದು ತಿಳಿದುಬಂದಿದೆ. ಇವರ ಭಾಷೆ ಸೆಮಿಟಿಕ್ ಗುಂಪಿನದು. ಹೀಬ್ರೂ ಮತ್ತು ಫಿನಿಷಿಯನ್ ಭಾಷೆಗಳಲ್ಲಿ ಹೆಚ್ಚು ಹೋಲಿಕೆ ಕಂಡು ಬರುತ್ತದೆ. ಫಿನಿಷಿಯನರು ಈಜಿಪ್ಟ್ ಜನರ ಮತಕ್ಕೆ ಸೇರಿದವರೆಂದು ಕ್ರೈಸ್ತಮತ ಗ್ರಂಥಗಳಿಂದ ತಿಳಿಯುತ್ತದೆ.

ಫಿನಿಷಿಯ ಪ್ರದೇಶ ಸಮುದ್ರ ಮತ್ತು ಪರ್ವತಶ್ರೇಣಿಯಿಂದ ಸುತ್ತುವರಿಯಲ್ಪಟ್ಟಿದ್ದರಿಂದ ವ್ಯವಸಾಯಕ್ಕೆ ಯೋಗ್ಯವಾಗಿರಲಿಲ್ಲ. ಆದ್ದರಿಂದ ಅವರು ವ್ಯಾಪಾರವನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದರು. ಕಾಲಕ್ರಮದಲ್ಲಿ ಅವರು ವ್ಯಾಪಾರವನ್ನು ಅಭಿವೃದ್ಧಿಗೊಳಿಸಿಕೊಂಡು ಪ್ರಖ್ಯಾತರಾದರು. ಮೆಡಿಟರೇನಿಯನ್ ಕರಾವಳಿಯಲ್ಲಿ ಫಿನಿಷಿಯನರು ಅನೇಕ ವಸಾಹತುಗಳನ್ನು ಸ್ಥಾಪಿಸಿದ್ದರು. ಅನೇಕ ನಗರಗಳನ್ನು ನಿರ್ಮಿಸಿಕೊಂಡಿದ್ದರು. ಫಿನಿಷಿಯನರು ಸಾಹಸಿಗಳೂ ವ್ಯಾಪಾರ ಚತುರರೂ ಕಷ್ಟಸಹಿಷ್ಣುಗಳೂ ಆಗಿದ್ದು ಪ್ರಪಂಚದ ನಾಗರಿಕತೆಗೆ ಹಲವು ಕಾಣಿಕೆಗಳನ್ನು ಸಲ್ಲಿಸಿದರು.

ಪ್ರಾಚೀನ ಈಜಿಪ್ಟಿನ ದೊರೆ 1ನೆಯ ಅಮಾಸಿಸ್ (ಕ್ರಿ.ಪೂ.ಸು. 1580-1557) ರಾಜ್ಯವನ್ನು ವಿಸ್ತರಿಸಿದಾಗ ಇತಿಹಾಸದ ಪುಟಗಳಲ್ಲಿ ಫಿನಿಷಿಯ ಕಾಣಿಸಿಕೊಂಡಿತು. ಅನಂತರ 3ನೆಯ ಥೂಟ್‍ಮೋಸೆ (ಕ್ರಿ.ಪೂ.ಸು. 1503-1496, 1493-1481) ಫಿನಿಷಿಯದ ಮೇಲೆ ತನ್ನ ಆಧಿಪತ್ಯವನ್ನು ಸ್ಥಾಪಿಸಿಕೊಂಡ. 4ನೆಯ ಅಮಿನೋಫಿಸನ (ಕ್ರಿ. ಪೂ.ಸು. 1375-1358) ತರುವಾಯ ಈಜಿಪ್ಟ್ ಫಿನಿಷಿಯದ ಮೇಲೆ ತನ್ನ ಹಿಡಿತವನ್ನು ಕಳೆದುಕೊಂಡಿತು. ಅದರೆ 2ನೆಯ ರ್ಯಾಮ್ಸೀಸ್ (ಕ್ರಿ.ಪೂ. 1292-1225) ಮತ್ತೊಮ್ಮೆ ಫಿನಿಷಿಯ ಪ್ರಾಂತ್ಯವನ್ನು ಜಯಿಸಿ ಈಜಿಪ್ಟಿನ ಅಧಿಕಾರವನ್ನು ಹೆಚ್ಚಿಸಿದ. 3ನೆಯ ರ್ಯಾಮ್ಸೀಸನ ಕಾಲದಿಂದ (ಕ್ರಿ.ಪೂ. 1198-1167) ಈಜಿಪ್ಟ್ ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿತು.

ಈಜಿಪ್ಟಿನ ದೊರೆಗಳ ಆಳ್ವಿಕೆಯ ಅನಂತರ ಅಸ್ಸಿರಿಯನರ ಆಕ್ರಮಣದವರೆಗಿನ ಕಾಲದಲ್ಲಿ ಫಿನಿಷಿಯದ ನಗರರಾಜ್ಯಗಳಲ್ಲಿ ಅಧಿರಾಜರಿರಲಿಲ್ಲ. ಗೀಬಲ್ ರಾಜ್ಯ ತನ್ನದೇ ಆದ ರಾಜರುಗಳ ಅಧೀನದಲ್ಲಿತ್ತು. ಕ್ರಿ.ಪೂ. 10ನೆಯ ಶತಮಾನದಲ್ಲಿ ಆಳಿದ ರಾಜರೆಂದರೆ ಹಿರಮ್, ಇಥೊಬಾಲ್ ಮತ್ತು ಅಬಿಬಾಲ್. ಈ ಕಾಲದಲ್ಲಿ ಫಿನಿಷಿಯನರ ನಗರವಾಗಿದ್ದ ಟೈರ್ ಪ್ರವರ್ಧಮಾನಕ್ಕೆ ಬಂತು. 1ನೆಯ ಹಿರಮ್‍ಟೈರ್‍ನಲ್ಲಿ ಕ್ರಿ.ಪೂ 970ರಿಂದ 936ರವರೆಗೆ ಆಳಿದ. ಈತನ ಕಾಲದಲ್ಲಿ ಫಿನಿಷಿಯನರು ಇಸ್ರೇಲಿನೊಡನೆ ಸ್ನೇಹಸಂಪರ್ಕವನ್ನೇರ್ಪಡಿಸಿಕೊಂಡಿದ್ದರು. ಸಾಲೊಮನ್ ದೊರೆಯ ಕಾಲದಲ್ಲಿ ಈ ಸ್ನೇಹ ಸಂಪರ್ಕ ಮತ್ತಷ್ಟು ಹೆಚ್ಚಿತು. ಸಾಲೊಮನ್ ಮತ್ತು ಹಿರಮ್ ಜೊತೆಗೂಡಿ ಅಕ್ಬ ಕೊಲ್ಲಿಯ ಮೇಲೆ ವ್ಯಾಪಾರಕ್ಕೋಸ್ಕರ ಆಕ್ರಮಣ ನಡೆಸಿದರು. ಹಿರಮ್‍ನ ಅನಂತರ ಇಥೊಬಾಲ್ ರಾಜ್ಯವಾಳಿದ.

ಕ್ರಿ.ಪೂ. 876 ರಿಂದ 605ರ ವರೆಗೆ ಇದನ್ನು ಅಸ್ಸಿರಿಯನ್ನರು ಆಕ್ರಮಿಸಿಕೊಂಡಿದ್ದರು. ಇಥೊಬಾಲ್ ಆಳ್ವಿಕೆಯ ಅನಂತರ ಫಿನಿಷಿಯದ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಯಿತು. ಅದು ಅಸ್ಸಿರಿಯದ ಆಕ್ರಮಣಕ್ಕೊಳಗಾಯಿತು. ಅಸ್ಸಿರಿಯದ ದೊರೆ 2ನೆಯ ಅಸುರ್‍ನಾಸಿರ್‍ಪಾಲ್ ಎಂಬವನು ಟೈರ್, ಸಿಡನ್ ಮತ್ತು ಬಿಬ್ಲಸ್‍ನ ದೊರೆಗಳಿಂದಲೂ ಈತನ ಮಗನಾದ 3ನೆಯ ಷಾಲ್ಮನೀಸರ್ ಟೈರ್ ಮತ್ತು ಸಿಡನ್ ನಗರಗಳಿಂದಲೂ ಕಪ್ಪಕಾಣಿಕೆಗಳನ್ನು ಪಡೆದುಕೊಳ್ಳುತ್ತಿದ್ದನೆಂದು ತಿಳಿದುಬಂದಿದೆ. ಕ್ರಿ.ಪೂ. 741ರ ವೇಳೆಗೆ 3ನೆಯ ಟಿಗ್ಲಾತ್ ಪಿಲೀಸರ್ ಕೂಡ ಕಪ್ಪಕಾಣಿಕೆಯನ್ನು ಪಡೆಯತೊಡಗಿದ. ಅಸ್ಸಿರಿಯದ ದೊರೆ ಸೆನಾಕೆರೀಬ್, ಸಿಡನ್‍ನ ದೊರೆಯನ್ನು ಸೋಲಿಸಿ ಓಡಿಸಿ, ಆ ದೊರೆಯ ಸ್ಥಾನದಲ್ಲಿ ಇನ್ನೊಬ್ಬನನ್ನು ಕೂರಿಸಿದ. ಕ್ರಿ.ಪೂ 668ರಲ್ಲಿ ಅಸುರ್‍ಬಾನಿಪಾಲ್ ಟೈರ್ ನಗರವನ್ನು ವಶಪಡಿಸಿಕೊಂಡ.

ಅನಂತರ ಟೈರ್ ನಗರ ನವ ಬ್ಯಾಬಿಲೋನಿಯನ್ ದೊರೆ ನೆಬುಕಡ್ನೆಸರನ ವಶವಾಯಿತು. ಕಾರ್ಕಮಿಷ್ ಕದನದ (ಕ್ರಿ. ಪೂ. 605) ಅನಂತರ ಕಾಲ್ಡಿಯನ್ನರು (ನವ ಬ್ಯಾಬಿಲೋನಿಯನರು) ಪಶ್ಚಿಮ ಏಷ್ಯದ ಅಧಿಪತಿಗಳಾದರು.

ಕ್ರಿ.ಪೂ. 538ರ ವೇಳೆಗೆ ಫಿನಿಷಿಯ ಪ್ರದೇಶ ಪರ್ಷಿಯನ್ ಸಾಮ್ರಾಜ್ಯದ ಭಾಗವಾಯಿತು. ಸಿಡನ್ ನಗರ ಪ್ರವರ್ಧಮಾನವಾಯಿತು. ಫಿನಿಷಿಯದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲಸಿದುವು, 4ನೆಯ ಶತಮಾನದಲ್ಲಿ ಅರಸನಾಗಿದ್ದ 1ನೆಯ ಸ್ಟ್ರೇಟನ್ ಆತೆನ್ಸಿನೊಡನೆ ಸ್ನೇಹಸಂಪರ್ಕವನ್ನೇರ್ಪಡಿಸಿಕೊಂಡಿದ್ದ. ಈತನ ಕಾಲದಲ್ಲಿ ಟೈರ್ ನಗರವನ್ನು ಸಾಲಮೀಸ್‍ನ ದೊರೆ ಇವಾಗೊರಸ್ ವಶಪಡಿಸಿಕೊಂಡ. ಸಿಡನ್ ನಗರ ಪರ್ಷಿಯನ್ನರ ವಿರುದ್ಧ ದಂಗೆ ಎದ್ದಿತು. ಅಲ್ಲಿಯ ಜನರು ಸಿರಿಯದ ಸತ್ರಪರನ್ನು ತಮ್ಮ ದೇಶದಿಂದ ಓಡಿಸಿದರು. ಸಿಡನ್‍ನ ಕೊನೆಯ ಅರಸನೇ 2ನೆಯ ಸ್ಟ್ರಾಟನ್.

ಡೇರಿಯಸ್ ದೊರೆಯ ಕಾಲದಿಂದ ಪರ್ಷಿಯಾದ ದೊರೆಗಳು ತಮ್ಮ ಅಧೀನದ ರಾಜ್ಯಗಳಿಗೆ ಪ್ರತ್ಯೇಕ ನಾಣ್ಯಗಳನ್ನು ಹೊರಡಿಸುವ ಅಧಿಕಾರ ನೀಡಿದರು. ಬಿಬ್ಲಸ್, ಸಿಡನ್ ಮತ್ತು ಟೈರ್ ನಗರಗಳು ಆದ ನಾಣ್ಯಪದ್ಧತಿಗಳನ್ನು ಅನುಸರಿಸಲಾರಂಭಿಸಿದುವು.

ಕ್ರಿ.ಪೂ. 333ರಲ್ಲಿ ಅಲೆಗ್ಸಾಂಡರ್ ಫಿನಿಷಿಯದ ಮೇಲೆ ದಂಡೆತ್ತಿಹೋಗಿ ಟೈರ್ ನಗರವನ್ನು ವಶಪಡಿಸಿಕೊಂಡ. ಕ್ರಿ.ಪೂ. 312ರಲ್ಲಿ ಟಾಲಮಿ ತನ್ನ ದಂಡನಾಯಕನಾಗಿದ್ದ ಫಿಲೊಕ್ಲೆಸನನ್ನು ಸಿಡನ್‍ನ ಅರಸನನ್ನಾಗಿ ಮಾಡಿದ. ಅದರೆ ಈತ ಬಹಳ ಕಾಲ ಆಳವಿಲ್ಲವೆಂದು ತಿಳಿಯುತ್ತದೆ. ತರುವಾಯ ಕ್ರಿ.ಪೂ. 3ನೆಯ ಶತಮಾನದ ಆದಿಭಾಗದಲ್ಲಿ ದೇಶೀಯ ರಾಜಸಂತತಿಯ ಆಳ್ವಿಕೆ ಇದ್ದುದು ಶಾಸನಗಳಿಂದ ತಿಳಿದು ಬರುತ್ತದೆ. ಇದರ ಆಳ್ವಿಕೆ ಕ್ರಿ.ಪೂ. 250ರಲ್ಲಿ ಕೊನೆಗೊಂಡಿತ್ತೆಂದು ತಿಳಿಯುತ್ತದೆ. ಕ್ರಿ.ಪೂ 140ರ ವೇಳೆಗೆ ಟೈರ್ ನಗರ ಸ್ವತಂತ್ರವಾಯಿತು.

ಕ್ರಿ.ಪೂ. 64ರಲ್ಲಿ, ಅಂದರೆ ಪಾಂಪೆಯ ಕಾಲದಲ್ಲಿ ಫಿನಿಷಿಯ ರೋಮಿನ ಒಂದು ಪ್ರಾಂತ್ಯವಾಗಿದ್ದ ಸಿರಿಯದೊಡನೆ ಸೇರಿಕೊಂಡಿತು. ಸಿಡನ್ ಮತ್ತು ಟೈರ್ ನಗರಗಳಿಗೆ ಸ್ವಯಂ ಆಡಳಿತವನ್ನು ರಚಿಸಿಕೊಳ್ಳುವ ಆಧಿಕಾರವನ್ನು ನೀಡಲಾಯಿತು. ಈ ಕಾಲದಲ್ಲಿ ಈ ನಗರಗಳು ಅಭಿವೃದ್ಧಿ ಹೊಂದಿದುವು. ಇವುಗಳ ವ್ಯಾಪಾರ ಹೆಚ್ಚಿತು. ಅನಂತರ ಫಿನಿಷಿಯ ಪ್ಯಾಲಸ್ಟೀನಿನ ವಶವಾಯಿತು.

ಆರ್ಥಿಕ ಜೀವನ : ಫಿನಿಷಿಯನರ ರಾಜಕೀಯ ಇತಿಹಾಸಕ್ಕಿಂತ ಅವರ ಆರ್ಥಿಕ ಜೀವನವೂ ಅವರ ಇತರ ಕೊಡುಗೆಗಳೂ ಮಾನವನ ನಾಗರಿಕತೆಯ ಇತಿಹಾಸದಲ್ಲಿ ಗಮನಾರ್ಹವಾಗಿವೆ.

ಫಿನಿಷಿಯನರು ಸಾಹಸಿಗಳೂ ವ್ಯಾಪಾರ ಚತುರರೂ ಶಕ್ತಿವಂತರೂ ಆಗಿದ್ದರು. ಅವರು ಮುಖ್ಯ ಬಂದರುಗಳಾದ ಟೈರ್, ಸಿಡನ್ ಮತ್ತು ಬಿಬ್ಲಸ್‍ಗಳ ಮೂಲಕ ದೂರದೇಶಗಳೊಡನೆ ವ್ಯಾಪಾರ ನಡೆಸುತ್ತಿದ್ದರು. ಅವರು ಸೈಪ್ರಸ್, ಕ್ರೀಟ್ ಮತ್ತು ಇಜೀಯನ್ ಸಮುದ್ರ ದ್ವೀಪಗಳಲ್ಲಿ, ಕಪ್ಪುಸಮುದ್ರದ ಬಂದರುಗಳಲ್ಲಿ, ಸಾರ್ಡಿನಿಯ, ಮಾರ್‍ಸೆಲಸ್, ಕ್ಯಾಡಿಜ್ ಕಾರ್ನ್‍ವಾಲ್, ಕಾರ್ತೇಜ್ ಮುಂತಾದ ಕಡೆಗಳಲ್ಲಿ ವ್ಯಾಪಾರ ಸಂಸ್ಥೆಗಳನ್ನು ಸ್ಥಾಪಸಿದರು. ಅವರು ಮಾಲ್ಟ, ಸಿಸಿಲಿ ಮತ್ತು ಕಾರ್ಸಿಕದಲ್ಲಿ ರಕ್ಷಣೆಗಾಗಿ ಸೈನ್ಯವನ್ನಿಟ್ಟುಕೊಂಡಿದ್ದರು.

ಅವರು ಸ್ಪೇನ್‍ನಿಂದ ಬೆಳ್ಳಿ, ಸೀಸ ಮತ್ತು ಕಬ್ಬಿಣವನ್ನು ಕಾರ್ನ್‍ವಾಲ್‍ನಿಂದ ಟನ್, ಆಫ್ರಿಕದಿಂದ ಉಷ್ಟ್ರಪಕ್ಷಿಯ ಗರಿಗಳು ಮತ್ತು ಚಿನ್ನ, ಭಾರತದಿಂದ ಸಂಬಾರ ಮತ್ತು ಹತ್ತಿ ವಸ್ತುಗಳನ್ನು, ಅರೇಬಿಯದಿಂದ ಹಾಲುಮಡ್ಡಿ ಮತ್ತು ಸುಗಂಧ ದ್ರವ್ಯಗಳನ್ನು, ಸಿರಿಯದಿಂದ ಮದ್ಯವನ್ನು ತರುತ್ತಿದ್ದರು. ಅವರು ಹೋದ ಕಡೆಗಳಲ್ಲಿ ತಮ್ಮ ವಸ್ತುಗಳನ್ನು ಮಾರಿ ಅಲ್ಲಿ ದೊರೆಯುತ್ತಿದ್ದ ವಸ್ತುಗಳನ್ನು ಉಪಯೋಗಿಸಿಕೊಂಡು ಬಗೆಬಗೆಯ ವಸ್ತುಗಳನ್ನು ತಯಾರಿಸಿ ಬೇರೆ ದೇಶಗಳಿಗೆ ಮಾರುತ್ತಿದ್ದರು. ಈ ರೀತಿಯ ವ್ಯಾಪಾರ ಅನೇಕ ಜನರಿಗೆ ಉದ್ಯೋಗ ಒದಗಿಸಿ ಕೊಟ್ಟಿತ್ತಲ್ಲದೆ ದೇಶದ ಪ್ರಗತಿಗೂ ಕಾರಣವಾಯಿತು.

ಫಿನಿಷಿಯನರು ಆಗಾಗ ಕಡಲುಗಳ್ಳತನದಲ್ಲೂ ಗುಲಾಮರ ವ್ಯಾಪಾರದಲ್ಲೂ ತೊಡಗುತ್ತಿದ್ದರೆಂದು ಯಹೂದ್ಯರ ಬರವಣಿಗೆಗಳಿಂದ ತಿಳಿದುಬಂದಿದೆ, ಫಿನಿಷಿಯನರ ಸಾಮಥ್ರ್ಯಕ್ಕೆ ಅಸಾಧ್ಯವಾದ್ದು ಯಾವುದೂ ಇರಲಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿರುತ್ತಾರೆ. ಅವರು ಅಟ್ಲಾಂಟಿಕ್ ಸಾಗರದಲ್ಲಿ ಯಾನ ಮಾಡುತ್ತಿದ್ದರು. ಸಿಲೀ ದ್ವೀಪಗಳಿಂದ ಕಬ್ಬಿಣವನ್ನು ತರುತ್ತಿದ್ದರು. ರೋಮನರೊಡನೆ ವ್ಯಾಪಾರದಲ್ಲಿ ಪೈಪೋಟಿ ನಡೆಸುತ್ತಿದ್ದರು. ಪ್ರತಿಯೊಂದು ದೇಶಕ್ಕೂ ಆ ದೇಶ ಹೊಂದಿದ್ದ ವಸ್ತುಗಳನ್ನು ಫಿನಿಷಿಯನ್ನರು ನೀಡುತ್ತಿದ್ದರೆಂದು ಹೇಳಲಾಗಿದೆ.

	ದೂರ ದೇಶಗಳೊಡನೆ ವ್ಯಾಪಾರ ನಡೆಸಲು ಮೆಡಿಟರೇನಿಯನ್ ಸಮುದ್ರದ ಪೂರ್ವತೀರದಲ್ಲಿ ಅವರು ಹಲವು ಬಂದರುಗಳನ್ನು ನಿರ್ಮಿಸಿಕೊಂಡಿದ್ದರು. ತರುವಾಯ ಉತ್ತರ ಆಫ್ರಿಕಾದಲ್ಲಿ ಕಾರ್ತೇಜ್ ಪಟ್ಟಣವನ್ನು ಕ್ರಿ.ಪೂ. 800ರಲ್ಲಿ ಸ್ಥಾಪಿಸಿಕೊಂಡರು. ಕಾರ್ತೇಜ್ ಫಿನಿಷಿಯನರ ಒಂದು ವಸಾಹತಾಗಿತ್ತು. ಕಾಲಕ್ರಮದಲ್ಲಿ ಕಾರ್ತೇಜ್ ಒಂದು ಮುಖ್ಯ ವ್ಯಾಪಾರ ಕೇಂದ್ರವಾಗಿ ಬೆಳೆಯಿತು. ವ್ಯಾಪಾರ ವಸ್ತು ವಸಾಹತುಗಳ ನಿರ್ಮಾಣದಿಂದಾಗಿ ಫಿನಿಷಿಯನರು ಕ್ರಿ.ಪೂ. 6ನೆಯ ಶತಮಾನದ ವೇಳೆಗೆ ಪ್ರಬಲರಾದರು. ಅವರ ಏಳಿಗೆಯನ್ನು ನೋಡಿದ ರೋಮನರು ಮೆಡಿಟರೇನಿಯನ್ ಸಮುದ್ರದ ಮೇಲೆ ತಮ್ಮ ಹಿಡಿತವನಿಟ್ಟುಕೊಳ್ಳಲು ಬಯಸಿ ಒಂದು ಶತಮಾನ ಕಾಲ ಹೋರಾಡಿ ಕಾರ್ತೇಜ್ ಪಟ್ಟಣವನ್ನು ವಶಪಡಿಸಿಕೊಂಡರು. ಫಿನಿಷಿಯನರು ಪ್ರಪಂಚದ ಪಶ್ಚಿಮ ಭಾಗದಲ್ಲಿ ಒಂದು ಪ್ರಬಲ ನೌಕಾಬಲಕ್ಕೆ ಅಡಿಪಾಯ ಹಾಕಿದರು. ಫಿನಿಷಿಯನರು ಪ್ರಾಚೀನ ಕಾಲದ ಸಾಹಸಿ ನಾವಿಕರೆಂದು ಪ್ರಸಿದ್ಧರಾಗಿದ್ದರು.
ಕೊಡುಗೆಗಳು : ಕಷ್ಟಸಹಿಷ್ಣುಗಳಾಗಿದ್ದು, ವ್ಯಾಪಾರಗಾರರಾಗಿ ಪ್ರಖ್ಯಾತರಾಗಿ, ಮೆಡಿಟರೇನಿಯನ್ ಸಮುದ್ರದಲ್ಲಿ ವಸಾಹತುಗಳನ್ನು ಸ್ಥಾಪಿಸಿ, ತೀರಪ್ರದೇಶದಲ್ಲಿ ಅನೇಕ ಪಟ್ಟಣಗಳು ಮತ್ತು ಬಂದರುಗಳನ್ನು ನಿರ್ಮಿಸಿಕೊಂಡು ಆ ಮೂಲಕ ಅವರು ಪ್ರಪಂಚ ನಾಗರಿಕತೆಗೆ ಹಲವು ಕಾಣಿಕೆಗಳನ್ನು ಸಲ್ಲಿಸಿರುತ್ತಾರೆ. ಈಜಿಪ್ಟ್, ಸ್ಥಳಗಳಿಗೆ ಹರಡಿದ ಫಿನಿಷಿಯನ್ನರು ಮಾನವನ ನಾಗರಿಕತೆಯ ಇತಿಹಾಸದಲ್ಲಿ ಪ್ರಸಿದ್ಧರಾಗಿದ್ದಾರೆ. ಫಿನಿಷಿಯನರು ಪೂರ್ವ ರಾಷ್ಟ್ರಗಳಿಗೆ ಭೇಟಿ ನೀಡಿ ಅಲ್ಲಿಯ ಜನರ ಜ್ಞಾನ ಮತ್ತು ಜೀವನಮಾರ್ಗವನ್ನು ಅರಿತರು.

ಕಮಲ, ಸ್ಫಿಂಕ್ಸ್ ವಿಗ್ರಹ, ಅನೇಕ ರೆಕ್ಕೆಗಳುಳ್ಳ ರಾಕ್ಷಸರ ವಿಗ್ರಹ ಮುಂತಾದವು ಪಾಶ್ಚಾತ್ಯರಿಗೆ ಫಿನಿಷಿಯನ್ ಶಿಲ್ಪಿಗಳಿಂದ ಪರಿಚಯವಾದುವು ಎಂದು ಹೇಳಲಾಗಿದೆ. ವಿವಿಧ ರೀತಿಯ ಉಡುಪುಗಳನ್ನು ಫಿನಿಷಿಯನರು ಇತರ ದೇಶಗಳಿಗೆ ಪರಿಚಯ ಮಾಡಿಸಿಕೊಟ್ಟರು. ಫಿನಿಷಿಯನರು ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳ ನಡುವೆ ಕೊಂಡಿಯಂತ್ತಿದ್ದರು. ಇವರು ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಪ್ರಖ್ಯಾತರಾಗಿದ್ದರು. ಫಿನಿಷಿಯನರು ಅನೇಕ ದೇಶಗಳೊಡನೆ ವ್ಯಾಪಾರ ನಡೆಸುತ್ತಿದ್ದು ಅಲ್ಲಿಯ ಜನರಲ್ಲಿ ಇತರರ ವಸ್ತುಗಳ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು.

ಫಿನಿಷಿಯನರು ಕೈಗಾರಿಕೆ ಮತ್ತು ಕುಶಲವಿದ್ಯೆಗಳಲ್ಲಿ ಪ್ರಾವೀಣ್ಯ ಪಡೆದಿದ್ದರೆಂಬುದು ಹೋಮರ್ ಕವಿಯ ವರ್ಣನೆಯಿಂದ ತಿಳಿದುಬರುತ್ತದೆ. ಇವರು ಕೈಗಾರಿಕೆಯಲ್ಲಿ ಮುಂದುವರಿದಿದ್ದರು. ಬಟ್ಟೆ ತಯಾರಿಕೆ ಇವರ ಒಂದು ಮುಖ್ಯ ಕೈಗಾರಿಕೆಯಾಗಿತ್ತು. ಇವರು ಬಟ್ಟೆಗೆ ಹಾಕುತ್ತಿದ್ದ ಕೆಂಪುಬಣ್ಣ ಬೇರೆ ಯಾರಿಗೂ ತಿಳಿದಿರಲಿಲ್ಲವೆಂದು ವ್ಯಕ್ತವಾಗುತ್ತದೆ. ಇವರು ಒಂದು ಜಾತಿಯ ಮೀನಿನ ಶರೀರದ ಸಣ್ಣ ಚೀಲವೊಂದರಲ್ಲಿ ಸಿಕ್ಕಿದ ವಸ್ತುಗಳನ್ನು ಉಪಯೋಗಿಸಿಕೊಂಡು ವಿಶೇಷ ರೀತಿಯ ಬಣ್ಣವನ್ನು ತಯಾರಿಸಿಕೊಳ್ಳುತ್ತಿದ್ದರು. ಗಾಜಿನ ತಯಾರಿಕೆಯೂ ಫಿನಿಷಿಯನರಿಗೆ ಗೊತ್ತಿತ್ತು. ಅದರಿಂದ ಇವರು ಅನೇಕ ಉತ್ತಮ ವಸ್ತುಗಳನ್ನು ತಯಾರಿಸುತ್ತಿದ್ದರು. ಗಾಜು ಅವರ ವ್ಯಾಪಾರದ ಒಂದು ವಿಶೇಷ ಸರಕಾಗಿತ್ತು. ಅವರು ತಾಮ್ರ ಮತ್ತು ಕಂಚಿನಿಂದ ಆಯುಧಗಳನ್ನು ತಯಾರಿಸಿಕೊಳ್ಳುತ್ತಿದ್ದರು ದಂತದಲ್ಲಿ ಸುಂದರ ಕೆತ್ತನೆ ಕೆಲಸ ಮಾಡುತ್ತಿದ್ದರು. ಅವರು ಲೋಹಗೆಲಸದಲ್ಲಿ ನುರಿತಿದ್ದರು. ಕುಶಲ ಶಿಲ್ಪಿಗಳು ಚಿನ್ನ, ಬೆಳ್ಳಿ, ಕಂಚು ಮುಂತಾದ ಲೋಹಗಳಲ್ಲಿ ಮೂರ್ತಿಗಳೇ ಮುಂತಾದವನ್ನು ನಿರ್ಮಿಸುತ್ತಿದ್ದರು. ಫಿನಿಷಿಯನರು ಗಣಿ ಕೆಲಸದಲ್ಲಿ ಪರಿಶ್ರಮ ಪಡೆದಿದ್ದರು.

ಆಸ್ಸಿರಿಯನ್ ದೊರೆಗಳು ತಮ್ಮ ಅರಮನೆಗಳಲ್ಲಿ ಪೀಠೋಪಕರಣಗಳನ್ನು ತಯಾರಿಸಲು ಫಿನಿಷಿಯರನ್ನು ನೇಮಿಸಿಕೊಳ್ಳುತ್ತಿದ್ದರು. ಹೀಬ್ರೂ ದೊರೆ ಸಾಲೊಮನ್ ಜೆರುಸಲೆಮ್‍ನಲ್ಲಿ ದೇವಾಲಯ ನಿರ್ಮಿಸಲು ಫಿನಿಷಿಯದ ವಾಸ್ತುಶಿಲ್ಪಿಗಳನ್ನು ನೇಮಿಸಿಕೊಂಡಿದ್ದನೆಂದು ತಿಳಿದುಬಂದಿದೆ.

ವ್ಯವಹಾರ ಚತುರತೆ ಮತ್ತು ವ್ಯಾಪಾರದಿಂದ ಪ್ರಬಲರಾದ ಫಿನಿಷಿಯನರು ಲಿಪಿಯ ರೂಪದಲ್ಲಿ ಮಹತ್ತರವಾದ ಮತ್ತು ಶಾಶ್ವತವಾದ ಕಾಣಿಕೆಯನ್ನು ಸಲ್ಲಿಸಿರುತ್ತಾರೆ. ಈಜಿಪ್ಟ್ ಮತ್ತಿತರ ಹಿಂದಿನ ನಾಗರೀಕತೆಗಳಲ್ಲಿ ಚಿತ್ರಲಿಪಿ ಬಳಕೆಯಲ್ಲಿತ್ತು. ಫಿನಿಷಿಯನರು ಅಕ್ಷರಗಳನ್ನು ರೂಢಿಗೆ ತಂದರು. ಫಿನಿಷಿಯನರ ವ್ಯಾಪಾರ ಹೆಚ್ಚಲಾಗಿ ಅವರು ಅದರ ಲೆಕ್ಕಪತ್ರಗಳನ್ನು ಇಟ್ಟುಕೊಳ್ಳಬೇಕಾಯಿತು. ಆದ್ದರಿಂದ ಅವರು ಬರವಣಿಗೆಯ ವಿಧಾನವನ್ನು ಕಂಡುಹಿಡಿದು ಅಕ್ಷರಗಳನ್ನು ರೂಢಿಗೆ ತಂದುಕೊಂಡರು. ಅವರ ವರ್ಣಮಾಲೆಯಲ್ಲಿ 22 ಅಕ್ಷರಗಳಿದ್ದುವು. ಅವುಗಳಲ್ಲಿ ಮೊದಲನೆಯದು ಅಲೆಪ್, ಎರಡನೆಯದು ಬೆತ್, ಗ್ರೀಕರು ತಮ್ಮ ವರ್ಣಮಾಲೆಯಲ್ಲಿ ಇವನ್ನು ಆಲ್ಫ, ಬೀಟ ಎಂದು ಕರೆದರು. ವರ್ಣಮಾಲೆಗೆ ಆಲ್ಫಬೆಟ್ ಎಂಬ ಹೆಸರು ರೂಢಿಗೆ ಬಂತು. ಹೀಗೆ ಫಿನಿಷಿಯನರ ಅಕ್ಷರಮಾಲೆಯನ್ನು ಅನುಸರಿಸಿ ಬೆಳಸಿದ ಗ್ರೀಕರು 22 ಅಕ್ಷರಗಳ ಜೊತೆಗೆ 4 ಸ್ವರಾಕ್ಷರಗಳನ್ನು ಸೇರಿಸಿ ಯೂರೋಪಿಗೆ ನೀಡಿದರು. ಮಾನವನ ನಾಗರಿಕತೆಗೆ ಇದೊಂದು ಮಹತ್ವದ ಕೊಡುಗೆಯಾಗಿದೆ.

ಫಿನಿಷಿಯನರು ಕಾಗದ, ಲೇಖನಿ ಮತ್ತು ಶಾಯಿಯ ಉಪಯೋಗವನ್ನು ತಿಳಿದಿದ್ದು ಅವನ್ನು ಯುರೋಪಿನ ಜನರಿಗೆ ಪರಿಚಯ ಮಾಡಿಕೊಟ್ಟರು. ಬಿಬ್ಲಸ್ ನಗರ ಕಾಗದಕ್ಕೆ ಹೆಸರಾಗಿತ್ತು. ಬೈಬಲ್ ಎಂಬ ಪದ ಫಿನಿಷಿಯನರ ಬಿಬ್ಲಸ್ ಎಂಬುದರಿಂದ ಬಂದಿದೆ ಎಂಬುದು ಕೆಲವರ ಅಭಿಪ್ರಾಯ.

ಫಿನಿಷಿಯನರು ನೌಕಾಯಾನದಲ್ಲಿ ಪ್ರಸಿದ್ಧರಾಗಿದ್ದರು. ಅಸ್ಸಿರಿಯನ್ ದೊರೆ ಸೆನಾಕೆರಿಬ್ ಮತ್ತು ಅಲೆಗ್ಸಾಂಡರ್ ಫಿನಿಷಿಯದ ನಾವಿಕರನ್ನು ನೌಕಾಯುದ್ಧಕ್ಕಾಗಿ ಮತ್ತು ವಸ್ತುಗಳ ರಫ್ತಿಗಾಗಿ ನೇಮಿಸಿಕೊಂಡಿದ್ದರೆಂದು ತಿಳಿದು ಬಂದಿದೆ. ಫಿನಿಷಿಯನರು ರೋಮನರನ್ನು ಎದುರಿಸುವಷ್ಟು ಸಮರ್ಥರಾದ ನೌಕಾಬಲ ಹೊಂದಿದ್ದರು. ಅವರು ಹಡಗು ದೋಣಿಗಳನ್ನು ನಿರ್ಮಿಸಿಕೊಳ್ಳುವುದರಲ್ಲೂ ಪ್ರವೀಣರಾಗಿದ್ದರು.

ಪ್ರಾಚೀನ ಕಾಲದಲ್ಲಿ ನಾವಿಕರಿಗೆ ದಿಕ್‍ಸೂಚಿಯ ಉಪಯೋಗ ತಿಳಿಯದಿದ್ದಾಗ ಫಿನಿಷಿಯನರು ಆಕಾಶದಲ್ಲಿ ಧ್ರುವ ನಕ್ಷತ್ರವನ್ನು ಗುರುತಿಸಿಕೊಂಡು ಅದರ ಸಹಾಯದಿಂದ ರಾತ್ರಿಯ ವೇಳೆಯಲ್ಲಿ ಸಮುದ್ರಯಾನ ಮಾಡುವಾಗ ದಿಕ್ಕನ್ನು ಕಂಡುಕೊಳ್ಳುತ್ತಿದ್ದರು. ಅದರ ನೆರವಿನಿಂದ ದೂರದೇಶಗಳಿಗೆ ಯಾನ ಕೈಗೊಳ್ಳುತ್ತಿದ್ದರು.

ಪ್ರಾಚೀನ ಕಾಲದಲ್ಲಿ ಫಿನಿಷಿಯನರು ಅಭಿವೃದ್ಧಿ ಹೊಂದಿದ ದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಜನರ ಕಲೆ, ವಿಜ್ಞಾನ ಮುಂತಾದವನ್ನು ಕಲಿತು ಅವನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡರು. ಬೇರೊಬ್ಬರಿಂದ ಕಲಿತದ್ದನ್ನು ದೂರದೇಶಗಳ ಜನರಿಗೆ ತಮ್ಮ ವ್ಯಾಪಾರದ ಮೂಲಕ ಸಾಗಿಸಿದರು.

ಫಿನಿಷಿಯನರು ಮರದಿಂದಲೂ ಕಲ್ಲಿನಿಂದಲೂ ದೇವಾಲಯಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಅವರು ಸಂಚರಿಸಿದ ಕಡೆಗಳಲ್ಲಿ ಮತ್ತು ಅವರ ವಸಾಹತುಗಳಲ್ಲಿ ತಮ್ಮ ಮತವನ್ನು ಪ್ರಚಾರಕ್ಕೆ ತಂದರು. ಫಿನಿಷಿಯನರು ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನೂ ಸೆಮಿಟಿಕ್ ಗುಂಪಿನವರು ಪೂಜಿಸುತ್ತಿದ್ದ ಬಾಲ್ ಎಂಬ ದೇವರನ್ನೂ ಪೂಜಿಸುತ್ತಿದ್ದರು. ಬಿಬ್ಲಸ್ ನಗರದ ದೇವರ ಹೆಸರು. ಎಲ್. ಅಶ್‍ತರ್ತೆ ಎಂಬುದು ಇವರ ಒಂದು ಹೆಣ್ಣು ದೇವತೆ. ಅವರಲ್ಲಿ ನರಬಲಿಯನ್ನು ಕೊಡುವ ಕ್ರೂರಪದ್ಧತಿಯಿತ್ತು. ಅವರು ಬಹುದೇವತಾರಾಧಕರಾಗಿದ್ದರು. ಮೆಲೋಖ್ ಎಂಬ ದೇವರಿಗೆ ಮಕ್ಕಳನ್ನು ಬಲಿ ಕೊಡುತ್ತಿದ್ದರು.

	ಫಿನಿಷಿಯನರು ಖಗೋಳಶಾಸ್ತ್ರ, ಗಣಿತಶಾಸ್ತ್ರಗಳಲ್ಲಿ ಜ್ಞಾನ ಸಂಪಾದಿಸಿದ್ದರು. ಫಿನಿಷಿಯದಲ್ಲಿ ಕ್ರಿ.ಪೂ. 12ನೆಯ ಶತಮಾನದಲ್ಲಿ ಸಂಜೋನಿಯಾತನ್ ಎಂಬ ಇತಿಹಾಸಕಾರ ಮತ್ತು ಮೋಸ್ಕಸ್ ಎಂಬ ತತ್ತ್ವಜ್ಞಾನಿ ಜೀವಿಸಿದ್ದರೆಂದು ತಿಳಿದುಬರುತ್ತದೆ.	
(ಟಿ.ವಿ.ಜಿಯು.; ಎಂ.ವಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ